ಪೆಲಿಕೊಸಾರಿಯ- 
ಪರ್ಮಿಯನ್ ಯುಗದ ಆದಿ ಸರೀಸೃಪಗಳ ಒಂದು ಗಣ. ಸರೀಸೃಪಗಳನ್ನು ಅವುಗಳ ತಲೆ ಬುರುಡೆಯಲ್ಲಿರುವ ಕಪೋಲ ರಂಧ್ರಗಳ ಆಧಾರದ ಮೇಲೆ ನಿರಂಧ್ರಿಗಳು (ಅನಾಪ್ಸಿಡ) ಏಕರಂಧ್ರಿಗಳು (ಸೈನಾಪ್ಸಿಡ) ಮತ್ತು ದ್ವಿರಂಧ್ರಿಗಳು (ಡಯಾಪ್ಸಿಡ) ಎಂಬ ಮೂರು ಪ್ರಮುಖ ಉಪವರ್ಗಗಳಾಗಿ ವಿಭಜಿಸಲಾಗಿದೆ. ಏಕರಂಧ್ರಿಗಳು ಕಾರ್ಬಾನಿಫೆರಸ್ ಉತ್ತರಾರ್ಧದಲ್ಲಿ ಮೊದಲು ಕಾಣಿಸಿಕೊಂಡವು. ಇವುಗಳಲ್ಲಿ ಸ್ತನಿ ಲಕ್ಷಣಗಳಿದ್ದುದರಿಂದ ಸ್ತನಿಗಳು ಸರೀಸೃಪಗಳಿಂದ ಉದ್ಭವಿಸಿದುವೆಂದು ಹೇಳಬಹುದು. ಏಕರಂಧ್ರ ಸರೀಸೃಪಗಳ ಅವಶೇಷಗಳು ಉತ್ತರ ಅಮೆರಿಕದ ಕ್ಯಾನ್ಸಸ್, ಓಕ್ಲಹಾಮ ಮತ್ತು ನ್ಯೂಮೆಕ್ಸಿಕೊ ಪ್ರಾಂತಗಳ ಕಾರ್ಬಾನಿಫೆರಸ್ ಅಂತ್ಯ ಮತ್ತು ಪರ್ಮಿಯನ್ ಆದಿಕಾಲಗಳ ಶಿಲೆಗಳಲ್ಲಿ ದೊರೆತಿವೆ. ಉಳಿದ ಕಡೆಗಳಲ್ಲಿ ಈ ಅವಶೇಷಗಳಿರುವುದು ವಿರಳ. ಇವೆಲ್ಲ ಮೂಲಜಾತಿಗಳ ಅವಶೇಷಗಳು. ವಿಕಾಸ ಹೊಂದಿದ ಏಕರಂಧ್ರಿ ಸರೀಸೃಪಗಳ ಅವಶೇಷಗಳು ಆಫ್ರಿಕದ ಕೆರೂ ನಿಕ್ಷೇಪಗಳಲ್ಲಿ ಹೇರಳವಾಗಿವೆ; ಉಳಿದ ಕಡೆಗಳಲ್ಲಿ ಬಲು ವಿರಳ. ಆದ್ದರಿಂದ ಏಕರಂಧ್ರಿಗಳನ್ನು ಎರಡು ಶಾಖೆಗಳಾಗಿ ವಿಭಾಗಿಸಿದೆ; ಮೂಲ ಜಾತಿಗಳನ್ನೊಳಗೊಂಡ ತೀರೋಮಾರ್ಗ ಅಥವಾ ಪೆಲಿಕೊಸಾರಿಯನ್ ಸರೀಸೃಪಗಳು ಮತ್ತು ವಿಕಾಸಗೊಂಡ ಜಾತಿಗಳಿಂದ ಕೂಡಿದ ತೀರಾಪ್ಸಿಡ ಸರೀಸೃಪಗಳು.

ಇವುಗಳಲ್ಲಿ ಅಂತರ ಕಪೋಲ ಎಲುಬೊಂದನ್ನು ಬಿಟ್ಟು ಲ್ಯಾಬಿರಿಂತೊಡಾಂಟ್ ದ್ವಿಚರ ಪ್ರಾಣಿಗಳ ತಲೆ ಬುರುಡೆಯಲ್ಲಿರುವ ಎಲುಬುಗಳೆಲ್ಲ ಇವೆ. ಪೀನಿಯಲ್ ರಂಧ್ರ ಸಹ ಉಂಟು. ಬೆನ್ನೆಲುಬಿನಲ್ಲಿ ದೊಡ್ಡ ಎಲುಬುಗಳು ಪ್ರಮುಖವಾಗಿ ಕಂಡರೂ, ಚಿಕ್ಕ ಎಲುಬುಗಳೂ ಉಳಿದಿವೆ. ಕಾಲುಗಳು ನಿರಂಧ್ರಿ ಸರೀಸೃಪಗಳ ಕಾಲುಗಳನ್ನು ಹೋಲುತ್ತವೆ. ಆದರೆ, ಸ್ವಲ್ಪ ತೆಳು ಅಷ್ಟೆ. ಪೆರಿಕೊಸಾರಿಯಗಳು ಕ್ಯಾಪ್ಟೊರೈನೊಮಾರ್ಫ ಎಂಬ ನಿರಂಧ್ರಿ ಸರೀಸೃಪವನ್ನು ಬಲುವಾಗಿ ಹೋಲುವುದರಿಂದ, ಇವನ್ನು ಕ್ಯಾಪ್ಟೊರೈನೊ ಮಾರ್ಫ ಸಂತತಿ ಎಂದು ನಂಬಲಾಗಿದೆ. ಓಪಿಯಾಕೊಡಾನ್ ಎಂಬುದು ಮಾದರಿ ಪೆಲಿಕೊಸಾರಿಯ. ಇದರ ವಿಕಾಸ ಎರಡು ಶಾಖೆಗಳಲ್ಲಿ ಮುಂದುವರಿದಿದೆ. ಒಂದು ಶಾಖೆಯ ಸರೀಸೃಪಗಳು ಮಾಂಸಹಾರಿಗಳು-ಸ್ಪೆನಕೊಡಾಂಟ; ಮತ್ತೊಂದು ಶಾಖೆಯವು ಸಸ್ಯಾಹಾರಿಗಳು-ಎಡಪೊಸಾರುಗಳು. 

ಸ್ಪೆನಕೊಡಾಂಟಗಳು ಓಪಿಯಾಕೊಡಾಂಟಗಳನ್ನು ಹೋಲುತ್ತವೆ; ಆದರೆ, ಹೆಚ್ಚು ವಿಕಾಸ ಹೊಂದಿದವು. ತಲೆ ಬುರುಡೆ ದೊಡ್ಡದು ಮತ್ತು ಎತ್ತರವಾಗಿದೆ. ಅದರ ಅಂಚು ಹಿಂಭಾಗದಲ್ಲಿ ದವಡೆಗಳ ಕಡೆಗೆ ಮುಮ್ಮೊಗವಾಗಿ ಬಾಗಿದೆ. ಇವುಗಳಲ್ಲಿ ಎರಡು ಮುಖ್ಯ ವಿಕಾಸ ಲಕ್ಷಣಗಳನ್ನು ಕಾಣಬಹುದು. ಹಲ್ಲುಗಳು, ಮುಂಭಾಗದ ದೊಡ್ಡ ಬಾಚಿ ಹಲ್ಲುಗಳು. ಬರ್ಜಿಯಾಕಾರದ ಹಲ್ಲುಗಳು ಮತ್ತು ಚಿಕ್ಕ ದವಡೆ ಹಲ್ಲುಗಳಾಗಿ ವ್ಯತ್ಯಾಸಗೊಂಡಿವೆ. ಕುತ್ತಿಗೆಯಿಂದ ಸೊಂಟದವರೆಗೆ ಬೆನ್ನೆಲುಬುಗಳ ಮುಳ್ಳುಗಳು ಎತ್ತರವಾಗಿ ಬೆಳೆದು ಚರ್ಮದ ಹೊದಿಕೆಯಿಂದ ಕೂಡಿ ಬೆನ್ನಿನ ಉದ್ದಕ್ಕೂ ನೌಕಾಪಟ ಅಥವಾ ಎಲುಬು ಪಟವಾಗಿದೆ. ಇದರ ಕಾರ್ಯವೇನಿದ್ದಿರಬಹುದೆಂದು ನಿರ್ಧರಿಸುವುದು ಕಷ್ಟ. ಆದರೆ, ಇಷ್ಟು ದೊಡ್ಡ ಅಂಗವನ್ನು ಹೊಂದಲು ಪ್ರಾಣಿಯ ಶಕ್ತಿ ಎಷ್ಟು ವ್ಯಯವಾಗುವುದೆಂಬುದನ್ನು ಯೋಚಿಸಿದರೆ ಇದು ಅತ್ಯವಶ್ಯವಾಗಿದ್ದಿರಲೇಬೇಕೆಂದು ಹೇಳಬೇಕಾಗುತ್ತದೆ. ಸ್ಪೆನಕೊಡಾನ್ ಮತ್ತು ಡಿಮೆಟ್ರೊಡಾನುಗಳು ಈ ಶಾಖೆಯ ಮಾದರಿ ಪ್ರಾಣಿಗಳು.

ಎಡಪೊಸಾರುಗಳು ಸಸ್ಯಹಾರಿಗಳು. ಅದ್ದರಿಂದ ಇವುಗಳ ಹಲ್ಲುಗಳಲ್ಲಿ ವೈವಿಧ್ಯ ಇಲ್ಲ. ಆದರೆ, ಆಹಾರವನ್ನು ಅಗಿಯಲು ಸಾಮಾನ್ಯ ಹಲ್ಲುಗಳ ಜೊತೆಗೆ ದಂತ ಫಲಕಗಳಿದ್ದುವು. ಎಲುಬು ಪಟಗಳೂ ಇದ್ದುವು. ಇವುಗಳ ಶರೀರ ದಪ್ಪ. ಹಾಗೂ ಪೀಪಾಯಿ ಆಕಾರ. ಕಾಟಿಲೊರಿಂಕಸ್ ಎಂಬುದು ಪೆಲಿಕೊಸಾರುಗಳಲ್ಲೇ ಬಹು ದೊಡ್ಡದು. 			         (ಡಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ